ಚಿಕ್ಕಬನಹಳ್ಳಿ ಗ್ರಾಮದಲ್ಲಿ ಈ ಬಾರಿ ಗಣೇಶೋತ್ಸವ ವಿಭಿನ್ನ ರೀತಿಯಲ್ಲಿ ಕಳೆಗಟ್ಟಿದೆ. ಮೊಟ್ಟ ಮೊದಲ ಬಾರಿಗೆ ಗ್ರಾಮದಲ್ಲಿ ಧರ್ಮಸ್ಥಳದ ದೇವಾಲಯದ ಮಾದರಿಯಲ್ಲಿ ಅಲಂಕಾರವನ್ನು ಸಿದ್ಧಪಡಿಸಿ, ಅದರಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ.
ಗ್ರಾಮದಲ್ಲಿ ನಡೆದ ಈ ಹೊಸ ಪ್ರಯೋಗ ಎಲ್ಲರ ಗಮನ ಸೆಳೆದಿದೆ. ಧರ್ಮಸ್ಥಳದ ವೈಭವ, ಸೌಂದರ್ಯ ಹಾಗೂ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ನಿರ್ಮಿಸಿದ ಈ ಸೆಟ್ ಕರ್ನಾಟಕದಾದ್ಯಂತವೂ ವಿಶಿಷ್ಟವಾಗಿಯೇ ಕಾಣಿಸುತ್ತಿದೆ. ಇಷ್ಟೊಂದು ಅದ್ಭುತ ಮಾದರಿಯನ್ನು ನಿರ್ಮಿಸಿರುವುದು ರಾಜ್ಯದಲ್ಲಿಯೇ ಮೊಟ್ಟ ಮೊದಲನೆ ಬಾರಿ ಎಂಬ ಹೆಗ್ಗಳಿಕೆ ಚಿಕ್ಕಬನಹಳ್ಳಿಗೆ ಲಭಿಸಿದೆ.
ಈ ಅಲಂಕಾರಕ್ಕೆ ಸುಮಾರು 5 ಲಕ್ಷಕ್ಕೂ ಹೆಚ್ಚು ಮೊತ್ತ ಖರ್ಚಾಗಿದ್ದು, ಸಂಘಟಕರು ಗ್ರಾಮಸ್ಥರ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಜನರನ್ನು ಇನ್ನಷ್ಟು ಆಕರ್ಷಿಸುವ ವಿಭಿನ್ನ ಪ್ರಯತ್ನಗಳನ್ನು ಕೈಗೊಳ್ಳುವುದರ ಜೊತೆಗೆ ದೇವರ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ತಮ್ಮ ಉದ್ದೇಶ ಎಂದು ಸಂಘಟಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಬಾರಿ ಚಿಕ್ಕಬನಹಳ್ಳಿಯ ಗಣೇಶೋತ್ಸವ ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲದೆ, ಕಲಾ-ಸಂಸ್ಕೃತಿ, ಭಕ್ತಿ ಹಾಗೂ ವೈಭವದ ಸಂಕೇತವಾಗಿಯೂ ಪರಿಣಮಿಸಿದೆ.